News

ಹಂಪಿಯಲ್ಲಿನ ಕಲ್ಲಿನ ರಥ ನಿಜಕ್ಕೂ ರಥವಲ್ಲ. ಕಲ್ಲಿನ ರಥದ ಹಿಂದಿನ ವಿಚಾರ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ವಿಶ್ವ ವಿಖ್ಯಾತ ಹಂಪಿ ಮತ್ತು ಅಲ್ಲಿನ ಕಲ್ಲಿನ ರಥ ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಯುನೆಸ್ಕೋ ವಿಶ್ವ ಪರಂಪರೆ ತಾಣದಲ್ಲೂ ಹೆಸರುವಾಸಿಯಾಗಿರುವ ಹಂಪಿ ಪ್ರವಾಸಿಗರ ನೆಚ್ಚಿನ ತಾಣ. ವಿಜಯನಗರದ ಅರಸ ಕೃಷ್ಣ ದೇವರಾಯನಿಂದ ನಿರ್ಮಾಣಗೊಂಡ ಭಾರತದ ಮೇರು ಶಿಲ್ಪ ಕಲಾ ಸಮುಚ್ಚಯ ಹಂಪಿ ಮತ್ತಲ್ಲಿನ ದೇವಾಲಯಗಳ ತಾಣ. ವಿಜಯವಿಠಲ ದೇವಾಲಯ ಹಾಗೂ ಅದರೆದುರಿರುವ ಕಲ್ಲಿನರಥ ಇಂದಿಗೂ ಹಲವು ದಂತಕಥೆಗಳ ಆಗರ. ಹದಿನಾರನೇ ಶತಮಾನದಲ್ಲಿ ಒರಿಸ್ಸಾದ ಮೇಲೊಮ್ಮೆ ಕೃಷ್ಣದೇವರಾಯ ದಂಡೆತ್ತಿ ಹೋಗಿದ್ದ.

 

 

ಯುದ್ಧದ ವೇಳೆ ಕೋನಾರ್ಕ್ ಮಾರ್ಗದಲ್ಲಿ ಸಾಗುವಾಗ ಕೃಷ್ಣದೇವರಾಯನ ಕಣ್ಣಿಗೆ ಕೋನಾರ್ಕ್ ನ ಕಲ್ಲಿನ ರಥ ಮತ್ತು ದೇವಾಲಯ ಬೀಳುತ್ತದೆ. ಅದಕ್ಕೆ ಮನಸೋತ ಕೃಷ್ಣದೇವರಾಯ ಹಂಪಿಯಲ್ಲೂ ಇಂತಹದ್ದೊಂದು ಕಲ್ಲಿನ ರಥ ನಿರ್ಮಿಸಲು ಮುಂದಾಗುತ್ತಾನೆ. ಅದರ ಫಲವಾಗಿ ಸೃಷ್ಟಿಯಾಗಿದ್ದೇ ಹಂಪಿಯ ಕಲ್ಲಿನ ರಥ. ದ್ರಾವಿಡ ಶೈಲಿಯಿಂದ ರಚಿತವಾಗಿರುವ ದೇವಾಲಯ ಮತ್ತು ಕಲ್ಲಿನ ರಥ ನಮ್ಮ ಹೆಮ್ಮೆಯ ಶಿಲ್ಪಕಲಾಕೃತಿಗಳು. ಹೀಗಿರುವ ಕಲ್ಲಿನ ರಥದ ಹಿಂದಿನ ವಿಚಾರ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

 

 

ಹುಬ್ಬೇರಿಸುವ ವಿಚಾರ ಇದಾದ್ರೂ ನಿಜ. ಹಂಪಿಯ ಅಪ್ರತಿಮ ಕಲ್ಲಿನ ರಥ ಅಸಲಿಯತ್ತಿನಲ್ಲಿ ದೇಗುಲ. ರಥದ ರಚನೆ ಹೊಂದಿರುವ ದೇವಾಲಯ. ರಥದ ಎದುರಿಗಿರುವ ವಿಜಯ ವಿಠಲ ದೇವಾಲಯದಲ್ಲಿ ವಿರಾಜಮಾನನಾಗಿರುವ ವಿಠಲನ ವಾಹನ ಗರುಡನಿಗಾಗಿ ಕಟ್ಟಿಸಿದ ದೇವಾಲಯ ಈ ರಥ. ಕಲ್ಲಿನ ರಥದ ಒಳಾವರಣ ಪ್ರವೇಶಿಸಿದಾಗ ಎದುರಿನ ಗೋಡೆಯಲ್ಲಿ ಗರುಡನ ಕೆತ್ತನೆ ಇರೋದು ಇದಕ್ಕೆ ಸಾಕ್ಷಿ. ಒಳಭಾಗ ಹೊಕ್ಕಾಗ ಮಾತ್ರ ಇದರ ದರ್ಶನ ಸಾಧ್ಯವಾಗುತ್ತದೆ.

 

 

ಹಾಗೇ ರಥದ ಮೇಲ್ಚಾವಣಿ ಗಮನಿಸಿದರೆ, ಅಲ್ಲೊಂದು ಗುಮ್ಮಟದ ರಚನೆ ಗೋಚರವಾಗುತ್ತದೆ. ಈ ಗುಮ್ಮಟದಲ್ಲಿ ಗರುಡ ವಿಗ್ರಹದ ಪ್ರತಿಷ್ಠಾಪನೆಯಾಗಿತ್ತಂತೆ. ವಿಜಯನಗರ ಸಾಮ್ರಾಜ್ಯದ ಮೇಲಿನ ಮೊಘಲರ ದಾಳಿ ನಡೆಸಿದ ವೇಳೆ ಗುಮ್ಮಟವನ್ನ ಕೆಡವಲಾಯಿತ್ತಂತೆ. ಹೀಗಾಗಿ ಇಂದು ನಮ್ಮ ಮುಂದಿರೋದು ಗುಮ್ಮಟ ರಹಿತ ರಥದ ರಚನೆ. ಇದರ ಜೊತೆಗೆ ರಥದೊಳಗೆ ಪ್ರತಿಷ್ಠಾಪಿಸಲಾಗಿದ್ದ ಗರುಡ ಸಹಿತ ವಿಗ್ರಹವನ್ನೂ ಮೊಘಲರ ದಾಳಿ ವೇಳೆ ಹೊತ್ತೊಯ್ಯಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಇದು ರಥವಾಗೇ ಕಾಣಲ್ಪಡುತ್ತದೆ.

 

 

ಹಾಗೇ ರಥದ ವಿಚಾರದಲ್ಲೊಂದು ದಂತ ಕಥೆಯೂ ಇದ್ದು ಭೂಮಿಯ ಭವಿಷ್ಯಕ್ಕೂ ಅದಕ್ಕೂ ನಂಟು ಹೊಂದಿದೆ. ನಂಬಿಕೆಯ ಪ್ರಕಾರ ಗುಮ್ಮಟದಿಂದ ಭಿನ್ನವಾಗಿರುವ ಗರುಡ ಮರಳಿ ಇದೇ ರಥದ ಮೇಲೆ ಬಂದು ಕೂರುತ್ತಾನೆಂದು, ಈ ಸಂದರ್ಭದಲ್ಲೇ ರಥದ ಗರ್ಭಸ್ಥಾನದಿಂದ ಕಳೆದುಹೋಗಿರುವ ವಿಗ್ರಹ ಮರಳಿ ಪ್ರತಿಷ್ಠಾಪನೆಯಾಗುತ್ತಂತೆ. ಈ ಪ್ರಕ್ರಿಯೆಗಳು ಮುಗಿದಾಗ ರಥರೂಪದ ದೇವಾಲಯ ಕೆಲ ಅಡಿಗಳಷ್ಟು ಮುಂದೆ ಸಾಗುತ್ತದೆಯಂತೆ. ಇಷ್ಟೆಲ್ಲಾ ಘಟನೆಗಳಾದ ಪ್ರಳಯ ಸಂಭವಿಸಿ ಜಗತ್ತಿನ ಅಂತ್ಯವಾಗಲಿದೆಯಂತೆ.

 

 

ಹೀಗೆ ಭವಿಷ್ಯದ ಲೆಕ್ಕಾಚಾರ ಮತ್ತು ಜಗತ್ತಿನ ಅಂತ್ಯ ಸೂಚಕವಾಗಿ ದೇವಾಲಯವನ್ನ ರಥದ ರೂಪದಲ್ಲಿ ವಿಶಿಷ್ಠವಾಗಿ ನೆಲೆಗೊಳಿಸಲಾಗಿದೆಯಂತೆ. ಕಥೆಯೋ.. ಕಲ್ಪನೆಯೋ.. ಏನೇ ಇರಲಿ.. ಆದರೆ ಕಲ್ಲಿನ ರಥದ ರಚನೆ ಮತ್ತು ಅದರ ರೂಪ ನಿಜಕ್ಕೂ ಬೆರಗು ಮೂಡಿಸುವಂತಹದ್ದು. ಮಹಾಬಲಿಪುರಂನ ಪಂಚ ರಥ ಕೋನಾರ್ಕ್ ನ ರಥ ಹಾಗೂ ಹಂಪಿ ರಥ ಭಾರತದಲ್ಲಿರುವ ಬೆರಳೆಣಿಕೆಯ ಅಪರೂಪದ ಕಲ್ಲಿನ ರಥ ರಚನೆಗಳು.

Related Articles

Leave a Reply

Your email address will not be published. Required fields are marked *

Back to top button