Entertainment

ಕನ್ನಡ ಚಿತ್ರರಂಗದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ದಿಡೀರ್ ಆಸ್ಪತ್ರೆಗೆ ದಾಖಲು..!!! ಕಾರಣವೇನು ಗೊತ್ತಾ..?

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾಘಾತವಾಗಿದೆ. ಮೈಸೂರಿನ ನಿವಾಸದಲ್ಲಿದ್ದ ಅವರಿಗೆ ಬುಧವಾರ ಮಧ್ಯರಾತ್ರಿ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಹೊರವಲಯದಲ್ಲಿರುವ ಬೋಗಾದಿಯಲ್ಲಿ ಅರ್ಜುನ್ ಜನ್ಯ (39) ಅವರು ಐಷಾರಾಮ ವಿಲ್ಲಾವೊಂದನ್ನು ಖರೀದಿ ಮಾಡಿದ್ದರು. ಆಗಾಗ ಮೈಸೂರಿಗೆ ಬಂದು ಹೋಗುತ್ತಿರುವ ಅವರು, ಬುಧವಾರ ರಾತ್ರಿ ವಿಲ್ಲಾದಲ್ಲಿಯೇ ತಂಗಿದ್ದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.

 

 

ಕೂಡಲೇ ಅವರ ಕುಟುಂಬದವರು ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರನ್ನು ಐಸಿಯುದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿಯೇ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವುದು ಎರಡು ಗಂಟೆ ತಡವಾಗಿದ್ದರೂ ಪರಿಸ್ಥಿತಿ ಕೈಮೀರುವ ಅಪಾಯವಿತ್ತು. ಆದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಚೇತರಿಸಿಕೊಂಡಿದ್ದಾರೆ. ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಎಲ್ಲರಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗ್ಯಾಸ್ಟ್ರಿಕ್ ಸಮಸ್ಯೆ ಅವರಲ್ಲಿಯೂ ಕಂಡುಬಂದಿದೆ. ಅದಕ್ಕೆ ಚಿಕಿತ್ಸೆ ಮುಂದುವರಿದಿದೆ. ತಲೆನೋವು ಮತ್ತು ಬೆನ್ನು ನೋವಿನಿಂದ ಸಂಪೂರ್ಣ ಗುಣಮುಖರಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

 

 

ಅರ್ಜುನ್ ಜನ್ಯ ಅವರಿಗೆ ಭಾನುವಾರವೇ ತೀವ್ರ ಹೊಟ್ಟೆನೋವು, ಎದೆ ನೋವು ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು . ಆಗಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಚೇತರಿಸಿಕೊಂಡಿದ್ದರು. ಬುಧವಾರ ರಾತ್ರಿ ಅವರಿಗೆ ಪುನಃ ಬೆನ್ನು, ಎದೆ ಹಾಗೂ ತಲೆ ನೋವು ಕಾಣಿಸಿಕೊಂಡು ತೀವ್ರವಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.mವೈದ್ಯ ಆದಿತ್ಯ ಉಡುಪ ನೇತೃತ್ವದ ತಂಡ ಅರ್ಜುನ್ ಜನ್ಯ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಾಣಿಸಿದ್ದರಿಂದ ಕೂಡಲೇ ಆಂಜಿಯೋಗ್ರಾಂ ಪರೀಕ್ಷೆ ಮಾಡಿಸಲಾಯಿತು.

 

 

ಆಗ ಹೃದಯ ಭಾಗದ ರಕ್ತನಾಳಗಳು ಶೇ 99ರಷ್ಟು ಬ್ಲಾಕ್ ಆಗಿರುವುದು ಕಂಡುಬಂತು. ತಕ್ಷಣ ಅವರ ಕುಟುಂಬದೊಂದಿಗೆ ಮಾತನಾಡಿ ಆಂಜಿಯೋಪ್ಲಾಸ್ಟಿ ಮಾಡಲಾಯಿತು ಎಂದು ಹೇಳಿದ್ದಾರೆ. ”ಹೊಟ್ಟೆ ನೋವು, ಭೇದಿ, ತಲೆ ನೋವು, ಬೆನ್ನು ನೋವು, ಎದೆ ನೋವು ಕಾಣಿಸಿಕೊಂಡಿದ್ದರಿಂದ ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಅಂತ ಚಿಕಿತ್ಸೆ ಕೊಡಲಾಗಿತ್ತು. ನಂತರ ಅವರು ಚೇತರಿಸಿಕೊಂಡರು. ಬಳಿಕ ಇಸಿಜಿಯಲ್ಲಿ ಭಾರಿ ಬದಲಾವಣೆ ಕಂಡು ಬಂತು. ಹೀಗಾಗಿ ಹೃದಯ ಸಮಸ್ಯೆಗೆ ಸಂಬಂಧಪಟ್ಟ ಚಿಕಿತ್ಸೆ ನೀಡಿದ್ದೇವೆ.

 

 

ಸರಿಯಾದ ಸಮಯಕ್ಕೆ ಆಂಜಿಯೋಗ್ರಫಿ, ಆಂಜಿಯೋಪ್ಲಾಸ್ಟಿ ಮಾಡಿದ್ದೇವೆ. ಅರ್ಜುನ್ ಜನ್ಯ ಆರೋಗ್ಯ ಇದೀಗ ಸ್ಥಿರವಾಗಿದೆ. ಗಾಬರಿ ಪಡುವಂಥದ್ದು ಏನೂ ಇಲ್ಲ. ಇನ್ನು ಎರಡು ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ” ಎಂದು ವೈದ್ಯರು ತಿಳಿಸಿದ್ದಾರೆ.

 

 

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕರ ಪೈಕಿ ಅರ್ಜುನ್ ಜನ್ಯ ಒಬ್ಬರು. ‘ಬಿರುಗಾಳಿ’, ‘ಕೆಂಪೇಗೌಡ’, ‘ರಾಂಬೋ’, ‘ಅಲೆಮಾರಿ’, ‘ಲಕ್ಕಿ’, ‘ಭಜರಂಗಿ’, ‘ಸ್ವೀಟಿ ನನ್ ಜೋಡಿ’, ‘ಅಧ್ಯಕ್ಷ’, ‘ಮಾಣಿಕ್ಯ’, ‘ವಜ್ರಕಾಯ’, ‘ಮುಕುಂದ ಮುರಾರಿ’, ‘ಚಕ್ರವರ್ತಿ’ ಸೇರಿದಂತೆ ಹಲವು ಚಿತ್ರಗಳಿಗೆ ಅವರು ನೀಡಿರುವ ಸಂಗೀತ ಸಾಕಷ್ಟು ಜನಪ್ರಿಯವಾಗಿವೆ. ಸದ್ಯ ‘ಭಜರಂಗಿ-2’, ‘ಮದಗಜ’, ‘ಅವತಾರ ಪುರುಷ’ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿರುವ ಅರ್ಜುನ್ ಜನ್ಯ ಖಾಸಗಿ ವಾಹಿನಿಯ ಗಾಯನ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button