ತಿರುಮಲದಲ್ಲಿ ನಯನತಾರಾ ಎಡವಟ್ಟು : ಕ್ಷಮೆ ಕೇಳಿದ ಗಂಡ ವಿಘ್ನೇಶ್

ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಮುಗಿಸಿ ನೇರವಾಗಿ ಬಂದಿದ್ದು ತಿರುಪತಿಗೆ. ವೆಂಕಟೇಶ್ವರನ ದರ್ಶನಕ್ಕೆ. ಪತಿ ಮತ್ತು ಪತ್ನಿ ಇಬ್ಬರೂ ದೈವಭಕ್ತರೇ. ನಯನತಾರಾ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾದವರು. ಆದರೆ ಇದೇ ವೇಳೆ ನಯನತಾರಾ ಒಂದು ಪ್ರಮಾದ ಎಸಗಿದ್ದಾರೆ.

 

 

ತಿರುಮಲದಲ್ಲಿ ದೇವಸ್ಥಾನದ ಆವರಣದಲ್ಲಿ ಓಡಾಡುವಾಗ ಚಪ್ಪಲಿ ಧರಿಸಿದ್ದಾರೆ. ಫೋಟೋಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಹೋಗಿದೆ. ಅದರಲ್ಲಿ ಅಭಿಮಾನಿಗಳು ಚಪ್ಪಲಿಯನ್ನು ನೋಡಿ ಇದೇನಾ ದೇವರ ಬಗ್ಗೆ ನಿಮಗಿರೋ ಭಕ್ತಿ ಎಂದು ಪ್ರಶ್ನಿಸಿದ್ದಾರೆ. ಟಿಟಿಡಿ ನಿಯಮದ ಪ್ರಕಾರ ಆವರಣದಲ್ಲಿ ಚಪ್ಪಲಿ ಧರಿಸುವ ಹಾಗಿಲ್ಲ ಹಾಗೂ ಫೋಟೋಶೂಟ್ ಕೂಡಾ ಮಾಡುವಂತಿಲ್ಲ.

 

 

ಚಪ್ಪಲಿ ಧರಿಸಿದ್ದ ಪತ್ನಿಯ ವಿಷಯಕ್ಕೆ ಪತಿ ವಿಘ್ನೇಶ್ ಶಿವನ್ ಕ್ಷಮೆ ಕೇಳಿದ್ದಾರೆ. ಸುತ್ತಮುತ್ತಲೂ ಜನ ಮುತ್ತಿಕೊಂಡಿದ್ದರು. ಹೀಗಾಗಿ ಚಪ್ಪಲಿ ಧರಿಸಿದ್ದ ವಿಷಯ ನಮ್ಮ ಗಮನಕ್ಕೆ ಬರಲಿಲ್ಲ. ವೆಂಕಟೇಶ್ವರನಿಗೆ ಅವಮಾನಿಸುವ ಉದ್ದೇಶ ನಯನತಾರಾಗೆ ಇರಲಿಲ್ಲ. ನಾವು ತಿಮ್ಮಪ್ಪನ ಭಕ್ತರು. ಇಲ್ಲಿಯೇ ಮದುವೆಯಾಗುವ ಆಸೆ ಇಟ್ಟುಕೊಂಡಿದ್ದೆವು. ಅದಕ್ಕಾಗಿ ಕಳೆದ 30 ದಿನಗಳಲ್ಲಿ 5 ಬಾರಿ ತಿರುಮಲಕ್ಕೆ ಬಂದಿದ್ದೇವೆ. ಇದು ಅರಿಯದೇ ಆಗಿರುವ ತಪ್ಪು ಎಂದು ಪತ್ರ ಬರೆದು ಕ್ಷಮೆ ಕೇಳಿದ್ದಾರೆ.